Thursday, June 18, 2009

ದೇವದಸಿಯಾದ ಸವಿತಾ

ಮನೆಮನೆ ತಿರುಗಿ ಭಿಕ್ಷೆಬೇದಿದ್ದರೆ ಅಪ್ಪ ಬಿಡುವದಿಲ್ಲ. ಶಿಕ್ಷಕಿಯರು ನಿನಗೆ ಓದಲು ಎಲ್ಲಾ ವ್ಯವಸ್ಥೆ ಮಾಡುತ್ತೇವೆ,ಬೇಡಲು ಹೋಗಬೇಡಾ ಎನ್ನುತ್ತಿದ್ದಾರೆ. ಸವಿತಾ ಯಾವುದನ್ನ ಒಪ್ಪಬೇಕೆಂಬ ಗೊಂದಲದಲ್ಲಿ ಕಂಗೆಟ್ಟಿದ್ದಾಳೆ.
ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಎಂಬ ಗ್ರಾಮದಲ್ಲಿ ವಾಸಿಸುತ್ತಿರುವ ಸವಿತಾ ಎಂಬ ಹನ್ನೆರಡು ವರ್ಷದ ಹಸುಳೆ ಸವಿತಾಳ ಬದುಕು. ಅವಳ ಇಡೀ ಬದುಕು ಅವಳ ಅನುಮತಿಯಿಲ್ಲದೆಯೇ ದೇವದಾಸಿ ಪದ್ದತಿಗಾಗಿ ಅರ್ಪಣಗೊಂಡಾಗಿದೆ. ೫ ಮಕ್ಕಳ ತಂದೆ ಬಸವರಾಜ ಬೋವಿ ಒಡ್ಡರ್,
‘ನಮ್ಮ ಮನೆತನದ ದೇವಿ ಯಲ್ಲಮ್ಮ ನನ್ನ ಈ ಮಗಳಲ್ಲಿ ಆವೀರ್ಭವಿಸಿದ್ದಾಳೆ. ಅದಕ್ಕೇ ಮುನೆಯ ಸಂಪ್ರದಾಯದಂತೆ ಯಲ್ಲಮ್ಮನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಮುತ್ತನ್ನ ಕಟ್ಟಿಸಿಕೊಂದು ಬಂದಿದ್ದೇನೆ. ಪ್ರತೀ ಮಂಗಳವಾರ,ಶುಕ್ರವಾರ ಮನಮನೆಗೆ ದೇವರನ್ನು ಹೊತ್ತು ತಿರುಗಿ ಭಿಕ್ಷೆ ಬೇಡಿ ತರಲೇ ಬೇಕು. ಇದಕ್ಕೆಲ್ಲಾ ಒಪ್ಪಿದ್ದರಿಂದಲೇ ಶಾಲೆ, ಇಲ್ಲವಾದರೆ ಅವಳಿಗೆ ಶಾಲೆಯೂ ಬೇಡ,ಏನೂ ಬೇಡ. ಯಾರೇ ಬಂದು ಕೇಳಿದ್ರೂ ಹೆದ್ರೋ ಮಗ ನಾನಲ್ಲ.”ಎಂದು ಗುಠರು ಹಾಕುತ್ತಿದ್ದಾನೆ.
ಅಷ್ಟಕ್ಕೂ ಸವಿತಾಳಲ್ಲಿ ಕಂಡು ಬಂದ ಯಲ್ಲಮ್ಮನ ಲಕ್ಷಣವೇನು ಗೊತ್ತೇ.? ಸವಿತಾಳ ಬೆನ್ನಿನ ಕೆಳಬಾಗದಲ್ಲಿ ಮೊಳ ಉದ್ದದ ಕೂದಲು ಮೂಡಿದೆ. ಅದೇ ಹಿನ್ನಲೆಯಲ್ಲಿ ಸವಿತಾ ದೇವದಾಸಿಯ ಪಟ್ಟ ಪಡೆಯುವಂತಾಗಿದೆ !
ಬದುಕಿನ ಬಣ್ಣವೇನೆಂದು ಕಾಣುವ ಮೊದಲೇ ಈ ಹಸುಳೆ ಸಂಪ್ರದಾಯದ ಕೂಪಕ್ಕೆ ತಳ್ಳಲ್ಪಟ್ಟಿದ್ದಾಳೆ. “ ಅವಳಿಗೆ ಮದುವೆ-ಗಿದುವೆ ಮಾಡುವದಿಲ್ಲ. ಬೇಕಿದ್ದರೆ ಬೇಕಾದವರ ಜೊತೆ ಬದುಕುತ್ತಾಳೆ.ಇಲ್ಲವಾದರೆ ಬೇಡಿತರುವ ಅಕ್ಕಿಯಿಂದ ಅವಳ ದಿನ ಕಳೆಯುತ್ತದೆ.” ಎಂದು ಪೊಗರಿನ ಮಾತನಾಡುವ ಸವಿತಾಳ ಅಪ್ಪನೇ ಸವಿತಾಳ ಬದುಕಿನ ಬೇಡಿಯಾಗಿ ನಿಂತಿರುವದು ವಿಪರ್ಯಾಸ. ಆದರೆ ಸವಿತಾ ಬೇಡಿತರುವ ಭಿಕ್ಷೆ ಈ ಕುಟುಂಬಕ್ಕೂ ವರವಾಗಿರುವದು ಸುಳ್ಳಲ್ಲ.
ದೇವದಾಸಿ ಧೀಕ್ಷೆ ಪಡೆದ ನಂತರ ಶಾಲೆಯನ್ನು ಬಿಟ್ಟಿದ್ದ ಸವಿತಾ ಹಲವರ ಒತ್ತಾಸೆಯ ಮೇರೆಗೆ ಮತ್ತೆ ಶಾಲೆಗೆ ಸೇರಿದ್ದಾಳೆ. ಹುಣಶೆಟ್ಟಿಕೊಪ್ಪದ ಶಾಲೆಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದವಳ ತಲೆಯ ಮೇಲೆ ‘ಭಿಕ್ಷೆ ಬೇಡಲೇ ಬೇಕೆಂಬ’ ಅಪ್ಪನ ಸ್ಂಪ್ರದಾಯದ ಕತ್ತಿ ತೂಗುತ್ತಿದೆ. ಸವಿತಾ ಮಾತ್ರ “ ನಂಗೆ ಓದೆಂದ್ರೆ ಇಷ್ಟ. ಭಿಕ್ಷೆ ಬೇಡದಿದ್ರೆ ಅಪ್ಪ ಹೊಡೆಯುತ್ತಾರೆ.ಶಾಲೆಯನ್ನೂ ಬಿಡಿಸಿ ಬಿಡುತ್ತಾರೆ.” ಎಂದು ಕಣ್ತುಂಬುತ್ತಾಳೆ. ಕುತ್ತಿಗೆಗೆ ಕಟ್ಟಿರುವ ‘ ಮುತ್ತಿನ’ ಉರುಳನ್ನ ತೋರಿಸುತ್ತಾಳೆ. ಆ ಉರುಳಿನ ಭವಿಷ್ಯವನ್ನ ನೆನೆದು ಕಣ್ನುಗಳು ಹನಿಗೂಡುತ್ತವೆ..

ಪುಟ್ತ ಹುಡುಗಿ ದೇವದಾಸಿಯಾದ ಅನಿಷ್ಟ ವದಂತಿಯ ಬೆನ್ಹತ್ತಿದ ನಮಗೆ ದಟ್ಟ ಕಾಡಿನ ನಡುವೆ ಅಡಗಿದ್ದ ಮನೆಯನ್ನ ಹುಡುಕಿ ತೆಗೆಯುವ್ದೇ ಕಷ್ಟವಾಗಿತ್ತು. ಬೋವಿ ಒಡ್ಡರ್ ಪರಿಚಯ ಇರುವವರಾರೂ ಮನೆತೋರಿಸಿ ಅವನನ್ನು ಎದುರು ಹಾಕಿಕೊಳ್ಲಲು ಸಿದ್ಧರಿರಲಿಲ್ಲ. ಕಷ್ಟಪಟ್ತು ಕಂಡು ಹಿಡಿದರೂ ಮನೆಯಲ್ಲಿ ಬೋವಿ ಒಡ್ಡರ್ ಇರಲಿಲ್ಲ. ಕಾಡಿನಲ್ಲಿ ಓಡುತ್ತಿದ್ದ ಸವಿತಾಳ ತಾಯನ್ನು ಬೆನ್ನಟ್ಟಿ ಮೊದಲು ಸುಳ್ಲಿನ ಮೂಲಕ ಮನ ಒಲಿಸಲು ಸಾದ್ಯ್ಹವಾದಾಗ ಸವಿತಾಳ ತಂದೆ ಬಸವರಾಜ ಸಂಪರ್ಕಕ್ಕೆ ಸಿಕ್ಕಿದ್ದ. ಮಗಳು ಬೇಡುವದನ್ನ ಬಿಟ್ಟರೆ ಶಾಲೆಯನ್ನು ಬಿಡಿಸುವ ಶಾಸನವನ್ನು ಹೊರಡಿಸಿ ಕಳುಹಿಸಿದ್ದಾನೆ.
ನಾಗರೀಕ ಸಮಾಜ,ಸರಕಾರಗಳೆಲ್ಲವೂ ಇಂಥ ಅಮಾನವೀಯ ಆಚರಣೆಗಳನ್ನು ನಿರ್ಭಂಧಿಸಿಯಾಗಿದೆ. ಆದರೆ ರ್ಕ್ತಗತವಾಗಿ ಬಂದ ಇಂತಹ ನಂಬಿಕೆಗಳನ್ನು ನಿಯಂತ್ರಿಸುವ ದಾರಿ ಮಂಜುಮಂಜಾಗಿದೆ.