Sunday, May 10, 2009

ಮರೆಯ ಬಾರದ, ಮರೆಯಲಾರದ ಶಿರಸಿಯ ಹಾವಿನ ಸುರೇಶಣ್ಣ.

ಸುರೇಶಣ್ಣನ ಬದುಕಿಗೆ ಇಂತಹ ಒಂದು ವಿದಾಯ ಕಾದಿತ್ತೆನ್ನುವದು ನಂಬಲು ಸಾಧ್ಯವಿಲ್ಲದ ಮಾತು. ಸಾವಿರಾರು ಹಾವುಗಳ ಜೀವುಳಿಸಿದಾತ ಹೀಗೆ ಅನಾಮಧೇಯ ಸಾವನ್ನು ಕಂಡಿದ್ದಾನೆಂಬ ಸತ್ಯ ಅರಗುವ ಮಾತಲ್ಲ. ಸುರೇಶಣ್ಣ ಸತ್ತ ಮೂರನೆಯ ದಿನ ಯಾಣಕ್ಕೆ ಹೋದ ಸಂದರ್ಭದಲ್ಲಿ `` ಎರಡು ಕಾಳಿಂಗ ಸರ್ಪ ಮನೆಗೇ ಬಂದು ಕುಳಿತು ಬಿಟ್ಟಿತ್ತು. ಅನಿವಾರ್ಯವಾಗಿ ಗುಂಡಿಕ್ಕ ಬೇಕಾಯ್ತು''ಎಂದು ಸ್ಥಳಿಕರು ಹೇಳಿಕೊಳ್ಳುತ್ತಿದ್ದದ್ದನ್ನ ಕೇಳಿದಾಗ ಸುರೇಶಣ್ಣನಿಲ್ಲದ ಖಾಲಿತನ ಇನ್ನಷ್ಟು ಗಾಢವಾಗುತ್ತಾ ನಡೆದಿದೆ.
ಪರಿಸರ ಅದೂ ಇದೂ ಎಂದು ಹೊತ್ತಿಲ್ಲದ ಹೊತ್ತಿನಲ್ಲೂ ತಿರುಗುವ, ತಿರುಗುತ್ತಿದ್ದ ಹುಚ್ಚು ಉಮೇದಿಗೆ ಜೊತೆ ನೀಡುವ ಪಂಗಡದ ಸದಸ್ಯರಲ್ಲೊಬ್ಬನಾಗಿದ್ದವ ಸುರೇಶಣ್ಣ. ಹಾವಿನ ಬಗೆಗಿದ್ದ ಭಿತಿ ಹೋಗಿ ಕುತೂಹಲ,ಪ್ರೀತಿ ಮೂಡಲೂ ಕಾರಣನಾಗಿದ್ದವ. ಅರಣ್ಯ ಮಹಾವಿದ್ಯಾಲಯದ ಶ್ರೀಧರ ಭಟ್ಟರಂತವರೂ ಸಹ ಏನಾದರೂ ಗೊಂದಲಗಳಿದ್ದರೆ ` ಇರಿ ಒಂದು ಮಾತು ಸುರೇಶಣ್ಣನನ್ನೂ ಕೇಳಿ ಬಿಡುವ'' ಎಂಬಷ್ಟು ಉರಗ ಸಾಮ್ರಾಜ್ಯದ ಅನುಭವಿ. ಜೊತೆಗೆ ಸೂಕ್ಷ್ಮ ಸಂವೇದಿ.
ಕಳೆದ ವರ್ಷ ಸುರೇಶಣ್ಣ ನಾಗರಹಾವು ಕಚ್ಚಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಈ ಹಾವಿನ ಸಾಹಸ ಅವನ ಮೂವತ್ತೇಳನೆಯ ಬಾರಿಯ ಸಾವಿನೊಂದಿಗಿನ ಸರಸವಾಗಿತ್ತು.`` ಮೇಡಂ, ನೋಡಿ ಹಾವು ಕಚ್ಚಿದರೆ ಸಾಯುವದಿಲ್ಲ.ವಿಷದಿಂದ ಸಾಯುವದಕ್ಕಿಂತ ಹೆದರಿ ಸಾಯುವದೇ ಹೆಚ್ಚು. ಧೈರ್ಯ ಒಂದಿದ್ದರೆ ಬದುಕ ಬಹುದು. ಇದನ್ನ ಜನರಿಗೆ ಹೇಳಬೇಕು.'' ಇದು ಆ ಉರಿವಿಷದ ನೋವು, ನಿದ್ರಿಸ ಬಾರದೆಂಬ ವೈದ್ಯರ ಎಚ್ಚರಿಕೆಯ ನಡುವೆ, ಮುತ್ತಿಕ್ಕುತ್ತಿದ್ದ ನಿದ್ರೆಯನ್ನೂ ಹೊರದೂಡುತ್ತಾ ಸುರೇಶಣ್ಣ ಹೇಳುತ್ತಿದ್ದ ಮಾತುಗಳಾಗಿದ್ದವು. ` ನಾವೆಲ್ಲ ಅರಣ್ಯ ಇಲಾಖೆಯೊಂದಿಗೆ ಮಾತಾಡ್ತೇವೆ ಸುರೇಶಣ್ಣಾ .ಒಂದು ಹಾವು ಹಿಡಿಯುವ ಸ್ಟಿಕ್ ತಗೋ ಬಾರ್ದಾ?'' ಎಂದಾಗ ` ಇಲ್ಲಾ, ಸ್ಟಿಕ್ ಬಳಸಿದರೆ ಹಾವಿಗೆ ಪೆಟ್ಟಾಗುತ್ತದೆ.'' ಎಂದು ತುಡಿದಿದ್ದನ್ನ ಹೇಗೆ ಮರೆಯುವದು.? ಯಾಣದ ಎರಡು ಕಾಳಿಂಗ ಸರ್ಪದ ಮಾರಣ ಹೋಮದಿಂದ ಆ ಪುಣ್ಯಾತ್ಮನ ಹೃದಯವೆಷ್ಟು ವಿಲಪಿಸಿದೆಯೋ ಗೊತ್ತಿಲ್ಲ.ನಾವಂತೂ ಅಸಹಾಯಕತೆ,ನೋವಿನಿಂದ ಕಣ್ದುಂಬಿದ್ದೆವು..ಸುಮಾರು 150 ಬಾರಿ ಆ ಘಟಸರ್ಪಗಳನ್ನು ಶರಾವತಿ ಕೊಳ್ಳದ ಕತ್ತಲೆ ಕಾನಿಗೆ ತವರು ಮನೆಗೆ ಕಳುಹಿಸುವಷ್ಟು ಪ್ರೀತಿಯಿಂದ ಕಳುಹಿಸಿ ಬರುತ್ತಿದ್ದ ಆತನ ಅಭಯ ಹಸ್ತವಿಲ್ಲದ ಪಶ್ಚಿಮಘಟ್ಟಗಳ ಉರಗ ಸಂತತಿಯೂ ಅನಾಥವಾಗಿ ಬಿಟ್ಟಿತೇ ಎಂಬ ಖೇದವೊಂದು ಮನವನ್ನು ಸುಡುತ್ತಿದೆ.
ಸುರೇಶಣ್ಣ ಕಾಳಿಂಗ ಹಾವನ್ನ ಹಿಡಿಯುವಾಗಲೂ ಬಳಸುತ್ತಿದ್ದುದು ಒಂದು ಗೋಣಿಚೀಲ. ಕೈಯಲ್ಲೊಂದು ಕತ್ತಿ. `ಕತ್ತಿಯೇಕೆ ಸುರೇಶಣ್ಣ? ಕೇಳಿದರೆ `` ನಾಗರ ಹಾವಿಗಿಂತ ಕಾಳಿಂಗ ಸರ್ಪ ಕಚ್ಚುವ ರೀತಿಯೂ ಬೇರೆ.ಉಗುಳುವ ವಿಷದ ಪ್ರಮಾಣವೂ ಆರುಪಟ್ಟು ಹೆಚ್ಚಿರುತ್ತದೆ. ಅದೇನಾದರೂ ಕಚ್ಚಿದರೆ ಬದುಕುವ ಆಸೆಗೆ ದೇಹದ ಆ ಬಾಗವನ್ನು ಕಡಿದು ಹಾಕಲು'' ಎಂದು ಉತ್ತರಿಸುವ ಸುರೇಶಣ್ಣನ ದೈರ್ಯಕ್ಕೆ ಬೇರೆ ಸಟರ್ಿಪಿಕೇಟ್ ಖಂಡಿತ ಬೇಡ. ಅವನ ಹಾವು ಹಿಡಿಯುವ ಆಟವೆಂದರೆ ಖಂಡಿತ ಅದೊಂದು ಕಾಳಿಂಗ ಮರ್ಧನವೇ ಸರಿ. ಮರದಿಂದ ಮರಕ್ಕೆ ಹಾರುವ ಕಾಳಿಂಗನ ಹಿಂದೆಯೇ ಮರದಿಂದ ಮರ ಸುತ್ತಿ ಚೀಲ ತುಂಬುತ್ತಿದ್ದ. ಆ ಹಾವನ್ನು ಕತ್ತಲೆ ಕಾನಿಗೆ ಬಿಡುವ ಸಂಬ್ರಮ ನಮ್ಮೆಲ್ಲರದ್ದು. ಅವನ ಭರವಸೆಯ ಹಿನ್ನಲೆಯಲ್ಲಿ ಜೀಪಿನ ಹಿಂದಿನ ಸೀಟಿನಲ್ಲಿ ಕುಳಿತು,ಕಾಳಿಂಗ ಸರ್ಪ ತುಂಬಿದ್ದ ಚೀಲವನ್ನೂ ಕಾಲ ಬುಡದಲ್ಲಿಯೇ ಇರಿಸಿಕೊಂಡು ಕತ್ತಲೆ ಕಾನಿನತ್ತ ಪಯಣಿಸಿದ ದಿನಗಳು ಮುಗಿದು ಹೋಗಿ ಬಿಟ್ಟಿತಾ?ಪ್ರತೀ ನಾಗಪಂಚಮಿಯಂದು ನೂರಾರು ನಿಜನಾಗರಗಳಿಗೆ ತನಿಯೆರೆಯುವ ಸಂಭ್ರಮ ಇನ್ನಿಲ್ಲವೇ.?
ಹಾವಿನಿಂದ ಕಡಿಸಿಕೊಂಡಾಗಲೆಲ್ಲ ಸಾವನ್ನು ಗೆದ್ದು ಬರುತ್ತಿದ್ದ ಸುರೇಶಣ್ಣ ಈ ಬಾರಿ ಮಾತ್ರ ಬರಲಿಲ್ಲ.ವಾಹನದಿಂದ ಹೊಡೆಸಿಕೊಂಡು ಸೀದಾ ಶವಾಗಾರಕ್ಕೆ ಹೋದ. ದೇಹವನ್ನು ನೋಡಬಾರದೆಂದು ಕೊಂಡರೂ ವೈನಿಯನ್ನು ನೋಡಲು ಹೋದಾಗ ನೋಡದಿರಲಾಗಲಿಲ್ಲ. ಪ್ರತೀ ಬಾರಿಯೂ ಕಾಳಿಂಗ ಸರ್ಪವನ್ನು ಹಿಡಿಯುವವರೆಗೆ ಮುಚ್ಚಿಡುತ್ತಿದ್ದ ಆತ ಹಿಡಿದು ಬಂದ ಮೇಲೆ ಮೇಲೆ ಮಾತ್ರ ವೈನಿಗೆ ಸತ್ಯವನ್ನು ಉಸುರುತ್ತಿದ್ದ. ಅಂತಿಮ ಪಯಣದಲ್ಲಿ ಮಾತ್ರ ತನ್ನ ಕೊಲೆಗಾರರ ಸತ್ಯವನ್ನೂ ಮುಚ್ಚಿಟ್ಟು ಹೊರಟು ಹೋಗಿದ್ದಾನೆ. ಹಾವಿನ ಅಪಾಯದ ಬಗ್ಗೆ ಮುನಿಸಿಕೊಳ್ಳುತ್ತಿದ್ದ ವೈನಿಯನ್ನು ಪ್ರತೀ ಬಾರಿಯೂ ಸಂತೈಸಿ ನಗಿಸುತ್ತಿದ್ದ ನಾವು ಈಗ...ಏನು ಹೇಳಲಿ.... ಈ ಜೂನ್ನಲ್ಲಿ ಕೆಂಪು ಜೇಡದ ಪರಿವಾರವನ್ನು ಹುಡುಕಿಕೊಂಡು ಕಾಡು ಸುತ್ತಿಸುವ ಭರವಸೆ,ರೆಕ್ಕೆಯ ಬಾವಲಿ ಹಿಡಿಯುವ ಕನಸು,ಹಾರುವ ಹಾವುಗಳ ಜೊತೆ ಮರ ಹತ್ತುವ ಸಾಹಸ,ಉಸುರುವಳ್ಳಿಯ ಜೀವನ ಭ್ರಮಣವನ್ನು ಇಲ್ಲಿಯೇ ಕಾಣಿಸುವ ಭರವಸೆ,ಯಾಣದ ಬೆಟ್ಟಗಳ ಮಧ್ಯವಿರುವ ಅಪರೂಪದ ಜೀವಿಯೊಂದನ್ನ ಹುಡುಕುವಂತಹ ಅದೆಷ್ಟೋ ಕನಸುಗಳಿಗೆಲ್ಲ ಖಾಲಿತನ ಬಡಿದಿದೆ. ನನ್ನ ವೃತ್ತಿಗೂ ಪ್ರವೃತ್ತಿಯ ಸೊಗಸನ್ನು ನೀಡಿದ್ದ ಎಲ್ಲ ಕ್ಷಣಗಳೂ ನೆನಪಾಗಿಯಷ್ಟೇ ಉಳಿಯುವಂತಾಗಿದೆ.ನನ್ನ ಭಾವಗಳು ಮಾತಾಗಲು ಸೋಲುತ್ತಿವೆ. ನೆನಪಿನ ಬುತ್ತಿಗೆ ಜಡಕುಗಂಟು ಬಿದ್ದು ಕೊಂಡಿದೆ.....
ದೇಹಲಿಯಿಂದ ಫೋನ್ ಮಾಡಿದ್ದ ಸುಶಾಂತ ಮೈಮರೆತು ಬಿಕ್ಕಿದ್ದ. ನನಗೆ .........ಅದೇ ಅಮೂರ್ತತೆ
ಕಾಡುವ ಭಾವಗಳಿಗೆಲ್ಲ ಮಾತಿನಾಸರೆ ಕೊಡಲಾರದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಂತಹ ಪುಟ್ಟ ನೆಲದ ಸಾಧಕನ ಒಂದು ದ್ರುಷ್ಯವನ್ನ ಇಲ್ಲಿ ನೀಡಿದ್ದೇನೆ............

No comments:

Post a Comment