Thursday, June 18, 2009

ದೇವದಸಿಯಾದ ಸವಿತಾ

ಮನೆಮನೆ ತಿರುಗಿ ಭಿಕ್ಷೆಬೇದಿದ್ದರೆ ಅಪ್ಪ ಬಿಡುವದಿಲ್ಲ. ಶಿಕ್ಷಕಿಯರು ನಿನಗೆ ಓದಲು ಎಲ್ಲಾ ವ್ಯವಸ್ಥೆ ಮಾಡುತ್ತೇವೆ,ಬೇಡಲು ಹೋಗಬೇಡಾ ಎನ್ನುತ್ತಿದ್ದಾರೆ. ಸವಿತಾ ಯಾವುದನ್ನ ಒಪ್ಪಬೇಕೆಂಬ ಗೊಂದಲದಲ್ಲಿ ಕಂಗೆಟ್ಟಿದ್ದಾಳೆ.
ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಎಂಬ ಗ್ರಾಮದಲ್ಲಿ ವಾಸಿಸುತ್ತಿರುವ ಸವಿತಾ ಎಂಬ ಹನ್ನೆರಡು ವರ್ಷದ ಹಸುಳೆ ಸವಿತಾಳ ಬದುಕು. ಅವಳ ಇಡೀ ಬದುಕು ಅವಳ ಅನುಮತಿಯಿಲ್ಲದೆಯೇ ದೇವದಾಸಿ ಪದ್ದತಿಗಾಗಿ ಅರ್ಪಣಗೊಂಡಾಗಿದೆ. ೫ ಮಕ್ಕಳ ತಂದೆ ಬಸವರಾಜ ಬೋವಿ ಒಡ್ಡರ್,
‘ನಮ್ಮ ಮನೆತನದ ದೇವಿ ಯಲ್ಲಮ್ಮ ನನ್ನ ಈ ಮಗಳಲ್ಲಿ ಆವೀರ್ಭವಿಸಿದ್ದಾಳೆ. ಅದಕ್ಕೇ ಮುನೆಯ ಸಂಪ್ರದಾಯದಂತೆ ಯಲ್ಲಮ್ಮನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಮುತ್ತನ್ನ ಕಟ್ಟಿಸಿಕೊಂದು ಬಂದಿದ್ದೇನೆ. ಪ್ರತೀ ಮಂಗಳವಾರ,ಶುಕ್ರವಾರ ಮನಮನೆಗೆ ದೇವರನ್ನು ಹೊತ್ತು ತಿರುಗಿ ಭಿಕ್ಷೆ ಬೇಡಿ ತರಲೇ ಬೇಕು. ಇದಕ್ಕೆಲ್ಲಾ ಒಪ್ಪಿದ್ದರಿಂದಲೇ ಶಾಲೆ, ಇಲ್ಲವಾದರೆ ಅವಳಿಗೆ ಶಾಲೆಯೂ ಬೇಡ,ಏನೂ ಬೇಡ. ಯಾರೇ ಬಂದು ಕೇಳಿದ್ರೂ ಹೆದ್ರೋ ಮಗ ನಾನಲ್ಲ.”ಎಂದು ಗುಠರು ಹಾಕುತ್ತಿದ್ದಾನೆ.
ಅಷ್ಟಕ್ಕೂ ಸವಿತಾಳಲ್ಲಿ ಕಂಡು ಬಂದ ಯಲ್ಲಮ್ಮನ ಲಕ್ಷಣವೇನು ಗೊತ್ತೇ.? ಸವಿತಾಳ ಬೆನ್ನಿನ ಕೆಳಬಾಗದಲ್ಲಿ ಮೊಳ ಉದ್ದದ ಕೂದಲು ಮೂಡಿದೆ. ಅದೇ ಹಿನ್ನಲೆಯಲ್ಲಿ ಸವಿತಾ ದೇವದಾಸಿಯ ಪಟ್ಟ ಪಡೆಯುವಂತಾಗಿದೆ !
ಬದುಕಿನ ಬಣ್ಣವೇನೆಂದು ಕಾಣುವ ಮೊದಲೇ ಈ ಹಸುಳೆ ಸಂಪ್ರದಾಯದ ಕೂಪಕ್ಕೆ ತಳ್ಳಲ್ಪಟ್ಟಿದ್ದಾಳೆ. “ ಅವಳಿಗೆ ಮದುವೆ-ಗಿದುವೆ ಮಾಡುವದಿಲ್ಲ. ಬೇಕಿದ್ದರೆ ಬೇಕಾದವರ ಜೊತೆ ಬದುಕುತ್ತಾಳೆ.ಇಲ್ಲವಾದರೆ ಬೇಡಿತರುವ ಅಕ್ಕಿಯಿಂದ ಅವಳ ದಿನ ಕಳೆಯುತ್ತದೆ.” ಎಂದು ಪೊಗರಿನ ಮಾತನಾಡುವ ಸವಿತಾಳ ಅಪ್ಪನೇ ಸವಿತಾಳ ಬದುಕಿನ ಬೇಡಿಯಾಗಿ ನಿಂತಿರುವದು ವಿಪರ್ಯಾಸ. ಆದರೆ ಸವಿತಾ ಬೇಡಿತರುವ ಭಿಕ್ಷೆ ಈ ಕುಟುಂಬಕ್ಕೂ ವರವಾಗಿರುವದು ಸುಳ್ಳಲ್ಲ.
ದೇವದಾಸಿ ಧೀಕ್ಷೆ ಪಡೆದ ನಂತರ ಶಾಲೆಯನ್ನು ಬಿಟ್ಟಿದ್ದ ಸವಿತಾ ಹಲವರ ಒತ್ತಾಸೆಯ ಮೇರೆಗೆ ಮತ್ತೆ ಶಾಲೆಗೆ ಸೇರಿದ್ದಾಳೆ. ಹುಣಶೆಟ್ಟಿಕೊಪ್ಪದ ಶಾಲೆಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದವಳ ತಲೆಯ ಮೇಲೆ ‘ಭಿಕ್ಷೆ ಬೇಡಲೇ ಬೇಕೆಂಬ’ ಅಪ್ಪನ ಸ್ಂಪ್ರದಾಯದ ಕತ್ತಿ ತೂಗುತ್ತಿದೆ. ಸವಿತಾ ಮಾತ್ರ “ ನಂಗೆ ಓದೆಂದ್ರೆ ಇಷ್ಟ. ಭಿಕ್ಷೆ ಬೇಡದಿದ್ರೆ ಅಪ್ಪ ಹೊಡೆಯುತ್ತಾರೆ.ಶಾಲೆಯನ್ನೂ ಬಿಡಿಸಿ ಬಿಡುತ್ತಾರೆ.” ಎಂದು ಕಣ್ತುಂಬುತ್ತಾಳೆ. ಕುತ್ತಿಗೆಗೆ ಕಟ್ಟಿರುವ ‘ ಮುತ್ತಿನ’ ಉರುಳನ್ನ ತೋರಿಸುತ್ತಾಳೆ. ಆ ಉರುಳಿನ ಭವಿಷ್ಯವನ್ನ ನೆನೆದು ಕಣ್ನುಗಳು ಹನಿಗೂಡುತ್ತವೆ..

ಪುಟ್ತ ಹುಡುಗಿ ದೇವದಾಸಿಯಾದ ಅನಿಷ್ಟ ವದಂತಿಯ ಬೆನ್ಹತ್ತಿದ ನಮಗೆ ದಟ್ಟ ಕಾಡಿನ ನಡುವೆ ಅಡಗಿದ್ದ ಮನೆಯನ್ನ ಹುಡುಕಿ ತೆಗೆಯುವ್ದೇ ಕಷ್ಟವಾಗಿತ್ತು. ಬೋವಿ ಒಡ್ಡರ್ ಪರಿಚಯ ಇರುವವರಾರೂ ಮನೆತೋರಿಸಿ ಅವನನ್ನು ಎದುರು ಹಾಕಿಕೊಳ್ಲಲು ಸಿದ್ಧರಿರಲಿಲ್ಲ. ಕಷ್ಟಪಟ್ತು ಕಂಡು ಹಿಡಿದರೂ ಮನೆಯಲ್ಲಿ ಬೋವಿ ಒಡ್ಡರ್ ಇರಲಿಲ್ಲ. ಕಾಡಿನಲ್ಲಿ ಓಡುತ್ತಿದ್ದ ಸವಿತಾಳ ತಾಯನ್ನು ಬೆನ್ನಟ್ಟಿ ಮೊದಲು ಸುಳ್ಲಿನ ಮೂಲಕ ಮನ ಒಲಿಸಲು ಸಾದ್ಯ್ಹವಾದಾಗ ಸವಿತಾಳ ತಂದೆ ಬಸವರಾಜ ಸಂಪರ್ಕಕ್ಕೆ ಸಿಕ್ಕಿದ್ದ. ಮಗಳು ಬೇಡುವದನ್ನ ಬಿಟ್ಟರೆ ಶಾಲೆಯನ್ನು ಬಿಡಿಸುವ ಶಾಸನವನ್ನು ಹೊರಡಿಸಿ ಕಳುಹಿಸಿದ್ದಾನೆ.
ನಾಗರೀಕ ಸಮಾಜ,ಸರಕಾರಗಳೆಲ್ಲವೂ ಇಂಥ ಅಮಾನವೀಯ ಆಚರಣೆಗಳನ್ನು ನಿರ್ಭಂಧಿಸಿಯಾಗಿದೆ. ಆದರೆ ರ್ಕ್ತಗತವಾಗಿ ಬಂದ ಇಂತಹ ನಂಬಿಕೆಗಳನ್ನು ನಿಯಂತ್ರಿಸುವ ದಾರಿ ಮಂಜುಮಂಜಾಗಿದೆ.

Sunday, May 10, 2009

ಮರೆಯ ಬಾರದ, ಮರೆಯಲಾರದ ಶಿರಸಿಯ ಹಾವಿನ ಸುರೇಶಣ್ಣ.

ಸುರೇಶಣ್ಣನ ಬದುಕಿಗೆ ಇಂತಹ ಒಂದು ವಿದಾಯ ಕಾದಿತ್ತೆನ್ನುವದು ನಂಬಲು ಸಾಧ್ಯವಿಲ್ಲದ ಮಾತು. ಸಾವಿರಾರು ಹಾವುಗಳ ಜೀವುಳಿಸಿದಾತ ಹೀಗೆ ಅನಾಮಧೇಯ ಸಾವನ್ನು ಕಂಡಿದ್ದಾನೆಂಬ ಸತ್ಯ ಅರಗುವ ಮಾತಲ್ಲ. ಸುರೇಶಣ್ಣ ಸತ್ತ ಮೂರನೆಯ ದಿನ ಯಾಣಕ್ಕೆ ಹೋದ ಸಂದರ್ಭದಲ್ಲಿ `` ಎರಡು ಕಾಳಿಂಗ ಸರ್ಪ ಮನೆಗೇ ಬಂದು ಕುಳಿತು ಬಿಟ್ಟಿತ್ತು. ಅನಿವಾರ್ಯವಾಗಿ ಗುಂಡಿಕ್ಕ ಬೇಕಾಯ್ತು''ಎಂದು ಸ್ಥಳಿಕರು ಹೇಳಿಕೊಳ್ಳುತ್ತಿದ್ದದ್ದನ್ನ ಕೇಳಿದಾಗ ಸುರೇಶಣ್ಣನಿಲ್ಲದ ಖಾಲಿತನ ಇನ್ನಷ್ಟು ಗಾಢವಾಗುತ್ತಾ ನಡೆದಿದೆ.
ಪರಿಸರ ಅದೂ ಇದೂ ಎಂದು ಹೊತ್ತಿಲ್ಲದ ಹೊತ್ತಿನಲ್ಲೂ ತಿರುಗುವ, ತಿರುಗುತ್ತಿದ್ದ ಹುಚ್ಚು ಉಮೇದಿಗೆ ಜೊತೆ ನೀಡುವ ಪಂಗಡದ ಸದಸ್ಯರಲ್ಲೊಬ್ಬನಾಗಿದ್ದವ ಸುರೇಶಣ್ಣ. ಹಾವಿನ ಬಗೆಗಿದ್ದ ಭಿತಿ ಹೋಗಿ ಕುತೂಹಲ,ಪ್ರೀತಿ ಮೂಡಲೂ ಕಾರಣನಾಗಿದ್ದವ. ಅರಣ್ಯ ಮಹಾವಿದ್ಯಾಲಯದ ಶ್ರೀಧರ ಭಟ್ಟರಂತವರೂ ಸಹ ಏನಾದರೂ ಗೊಂದಲಗಳಿದ್ದರೆ ` ಇರಿ ಒಂದು ಮಾತು ಸುರೇಶಣ್ಣನನ್ನೂ ಕೇಳಿ ಬಿಡುವ'' ಎಂಬಷ್ಟು ಉರಗ ಸಾಮ್ರಾಜ್ಯದ ಅನುಭವಿ. ಜೊತೆಗೆ ಸೂಕ್ಷ್ಮ ಸಂವೇದಿ.
ಕಳೆದ ವರ್ಷ ಸುರೇಶಣ್ಣ ನಾಗರಹಾವು ಕಚ್ಚಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಈ ಹಾವಿನ ಸಾಹಸ ಅವನ ಮೂವತ್ತೇಳನೆಯ ಬಾರಿಯ ಸಾವಿನೊಂದಿಗಿನ ಸರಸವಾಗಿತ್ತು.`` ಮೇಡಂ, ನೋಡಿ ಹಾವು ಕಚ್ಚಿದರೆ ಸಾಯುವದಿಲ್ಲ.ವಿಷದಿಂದ ಸಾಯುವದಕ್ಕಿಂತ ಹೆದರಿ ಸಾಯುವದೇ ಹೆಚ್ಚು. ಧೈರ್ಯ ಒಂದಿದ್ದರೆ ಬದುಕ ಬಹುದು. ಇದನ್ನ ಜನರಿಗೆ ಹೇಳಬೇಕು.'' ಇದು ಆ ಉರಿವಿಷದ ನೋವು, ನಿದ್ರಿಸ ಬಾರದೆಂಬ ವೈದ್ಯರ ಎಚ್ಚರಿಕೆಯ ನಡುವೆ, ಮುತ್ತಿಕ್ಕುತ್ತಿದ್ದ ನಿದ್ರೆಯನ್ನೂ ಹೊರದೂಡುತ್ತಾ ಸುರೇಶಣ್ಣ ಹೇಳುತ್ತಿದ್ದ ಮಾತುಗಳಾಗಿದ್ದವು. ` ನಾವೆಲ್ಲ ಅರಣ್ಯ ಇಲಾಖೆಯೊಂದಿಗೆ ಮಾತಾಡ್ತೇವೆ ಸುರೇಶಣ್ಣಾ .ಒಂದು ಹಾವು ಹಿಡಿಯುವ ಸ್ಟಿಕ್ ತಗೋ ಬಾರ್ದಾ?'' ಎಂದಾಗ ` ಇಲ್ಲಾ, ಸ್ಟಿಕ್ ಬಳಸಿದರೆ ಹಾವಿಗೆ ಪೆಟ್ಟಾಗುತ್ತದೆ.'' ಎಂದು ತುಡಿದಿದ್ದನ್ನ ಹೇಗೆ ಮರೆಯುವದು.? ಯಾಣದ ಎರಡು ಕಾಳಿಂಗ ಸರ್ಪದ ಮಾರಣ ಹೋಮದಿಂದ ಆ ಪುಣ್ಯಾತ್ಮನ ಹೃದಯವೆಷ್ಟು ವಿಲಪಿಸಿದೆಯೋ ಗೊತ್ತಿಲ್ಲ.ನಾವಂತೂ ಅಸಹಾಯಕತೆ,ನೋವಿನಿಂದ ಕಣ್ದುಂಬಿದ್ದೆವು..ಸುಮಾರು 150 ಬಾರಿ ಆ ಘಟಸರ್ಪಗಳನ್ನು ಶರಾವತಿ ಕೊಳ್ಳದ ಕತ್ತಲೆ ಕಾನಿಗೆ ತವರು ಮನೆಗೆ ಕಳುಹಿಸುವಷ್ಟು ಪ್ರೀತಿಯಿಂದ ಕಳುಹಿಸಿ ಬರುತ್ತಿದ್ದ ಆತನ ಅಭಯ ಹಸ್ತವಿಲ್ಲದ ಪಶ್ಚಿಮಘಟ್ಟಗಳ ಉರಗ ಸಂತತಿಯೂ ಅನಾಥವಾಗಿ ಬಿಟ್ಟಿತೇ ಎಂಬ ಖೇದವೊಂದು ಮನವನ್ನು ಸುಡುತ್ತಿದೆ.
ಸುರೇಶಣ್ಣ ಕಾಳಿಂಗ ಹಾವನ್ನ ಹಿಡಿಯುವಾಗಲೂ ಬಳಸುತ್ತಿದ್ದುದು ಒಂದು ಗೋಣಿಚೀಲ. ಕೈಯಲ್ಲೊಂದು ಕತ್ತಿ. `ಕತ್ತಿಯೇಕೆ ಸುರೇಶಣ್ಣ? ಕೇಳಿದರೆ `` ನಾಗರ ಹಾವಿಗಿಂತ ಕಾಳಿಂಗ ಸರ್ಪ ಕಚ್ಚುವ ರೀತಿಯೂ ಬೇರೆ.ಉಗುಳುವ ವಿಷದ ಪ್ರಮಾಣವೂ ಆರುಪಟ್ಟು ಹೆಚ್ಚಿರುತ್ತದೆ. ಅದೇನಾದರೂ ಕಚ್ಚಿದರೆ ಬದುಕುವ ಆಸೆಗೆ ದೇಹದ ಆ ಬಾಗವನ್ನು ಕಡಿದು ಹಾಕಲು'' ಎಂದು ಉತ್ತರಿಸುವ ಸುರೇಶಣ್ಣನ ದೈರ್ಯಕ್ಕೆ ಬೇರೆ ಸಟರ್ಿಪಿಕೇಟ್ ಖಂಡಿತ ಬೇಡ. ಅವನ ಹಾವು ಹಿಡಿಯುವ ಆಟವೆಂದರೆ ಖಂಡಿತ ಅದೊಂದು ಕಾಳಿಂಗ ಮರ್ಧನವೇ ಸರಿ. ಮರದಿಂದ ಮರಕ್ಕೆ ಹಾರುವ ಕಾಳಿಂಗನ ಹಿಂದೆಯೇ ಮರದಿಂದ ಮರ ಸುತ್ತಿ ಚೀಲ ತುಂಬುತ್ತಿದ್ದ. ಆ ಹಾವನ್ನು ಕತ್ತಲೆ ಕಾನಿಗೆ ಬಿಡುವ ಸಂಬ್ರಮ ನಮ್ಮೆಲ್ಲರದ್ದು. ಅವನ ಭರವಸೆಯ ಹಿನ್ನಲೆಯಲ್ಲಿ ಜೀಪಿನ ಹಿಂದಿನ ಸೀಟಿನಲ್ಲಿ ಕುಳಿತು,ಕಾಳಿಂಗ ಸರ್ಪ ತುಂಬಿದ್ದ ಚೀಲವನ್ನೂ ಕಾಲ ಬುಡದಲ್ಲಿಯೇ ಇರಿಸಿಕೊಂಡು ಕತ್ತಲೆ ಕಾನಿನತ್ತ ಪಯಣಿಸಿದ ದಿನಗಳು ಮುಗಿದು ಹೋಗಿ ಬಿಟ್ಟಿತಾ?ಪ್ರತೀ ನಾಗಪಂಚಮಿಯಂದು ನೂರಾರು ನಿಜನಾಗರಗಳಿಗೆ ತನಿಯೆರೆಯುವ ಸಂಭ್ರಮ ಇನ್ನಿಲ್ಲವೇ.?
ಹಾವಿನಿಂದ ಕಡಿಸಿಕೊಂಡಾಗಲೆಲ್ಲ ಸಾವನ್ನು ಗೆದ್ದು ಬರುತ್ತಿದ್ದ ಸುರೇಶಣ್ಣ ಈ ಬಾರಿ ಮಾತ್ರ ಬರಲಿಲ್ಲ.ವಾಹನದಿಂದ ಹೊಡೆಸಿಕೊಂಡು ಸೀದಾ ಶವಾಗಾರಕ್ಕೆ ಹೋದ. ದೇಹವನ್ನು ನೋಡಬಾರದೆಂದು ಕೊಂಡರೂ ವೈನಿಯನ್ನು ನೋಡಲು ಹೋದಾಗ ನೋಡದಿರಲಾಗಲಿಲ್ಲ. ಪ್ರತೀ ಬಾರಿಯೂ ಕಾಳಿಂಗ ಸರ್ಪವನ್ನು ಹಿಡಿಯುವವರೆಗೆ ಮುಚ್ಚಿಡುತ್ತಿದ್ದ ಆತ ಹಿಡಿದು ಬಂದ ಮೇಲೆ ಮೇಲೆ ಮಾತ್ರ ವೈನಿಗೆ ಸತ್ಯವನ್ನು ಉಸುರುತ್ತಿದ್ದ. ಅಂತಿಮ ಪಯಣದಲ್ಲಿ ಮಾತ್ರ ತನ್ನ ಕೊಲೆಗಾರರ ಸತ್ಯವನ್ನೂ ಮುಚ್ಚಿಟ್ಟು ಹೊರಟು ಹೋಗಿದ್ದಾನೆ. ಹಾವಿನ ಅಪಾಯದ ಬಗ್ಗೆ ಮುನಿಸಿಕೊಳ್ಳುತ್ತಿದ್ದ ವೈನಿಯನ್ನು ಪ್ರತೀ ಬಾರಿಯೂ ಸಂತೈಸಿ ನಗಿಸುತ್ತಿದ್ದ ನಾವು ಈಗ...ಏನು ಹೇಳಲಿ.... ಈ ಜೂನ್ನಲ್ಲಿ ಕೆಂಪು ಜೇಡದ ಪರಿವಾರವನ್ನು ಹುಡುಕಿಕೊಂಡು ಕಾಡು ಸುತ್ತಿಸುವ ಭರವಸೆ,ರೆಕ್ಕೆಯ ಬಾವಲಿ ಹಿಡಿಯುವ ಕನಸು,ಹಾರುವ ಹಾವುಗಳ ಜೊತೆ ಮರ ಹತ್ತುವ ಸಾಹಸ,ಉಸುರುವಳ್ಳಿಯ ಜೀವನ ಭ್ರಮಣವನ್ನು ಇಲ್ಲಿಯೇ ಕಾಣಿಸುವ ಭರವಸೆ,ಯಾಣದ ಬೆಟ್ಟಗಳ ಮಧ್ಯವಿರುವ ಅಪರೂಪದ ಜೀವಿಯೊಂದನ್ನ ಹುಡುಕುವಂತಹ ಅದೆಷ್ಟೋ ಕನಸುಗಳಿಗೆಲ್ಲ ಖಾಲಿತನ ಬಡಿದಿದೆ. ನನ್ನ ವೃತ್ತಿಗೂ ಪ್ರವೃತ್ತಿಯ ಸೊಗಸನ್ನು ನೀಡಿದ್ದ ಎಲ್ಲ ಕ್ಷಣಗಳೂ ನೆನಪಾಗಿಯಷ್ಟೇ ಉಳಿಯುವಂತಾಗಿದೆ.ನನ್ನ ಭಾವಗಳು ಮಾತಾಗಲು ಸೋಲುತ್ತಿವೆ. ನೆನಪಿನ ಬುತ್ತಿಗೆ ಜಡಕುಗಂಟು ಬಿದ್ದು ಕೊಂಡಿದೆ.....
ದೇಹಲಿಯಿಂದ ಫೋನ್ ಮಾಡಿದ್ದ ಸುಶಾಂತ ಮೈಮರೆತು ಬಿಕ್ಕಿದ್ದ. ನನಗೆ .........ಅದೇ ಅಮೂರ್ತತೆ
ಕಾಡುವ ಭಾವಗಳಿಗೆಲ್ಲ ಮಾತಿನಾಸರೆ ಕೊಡಲಾರದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಂತಹ ಪುಟ್ಟ ನೆಲದ ಸಾಧಕನ ಒಂದು ದ್ರುಷ್ಯವನ್ನ ಇಲ್ಲಿ ನೀಡಿದ್ದೇನೆ............

Saturday, April 25, 2009

ಸುಬ್ಯಾ ಅನ್ನೋ ಮಂದಣ್ಣ.

ನಮ್ಮ ಮನೆ ತಂಡದ ಆಳು ಸುಬ್ಯಾ ಅಥವಾ ಸುಬ್ಬಯ್ಯನನ್ನ ನೋಡಿದಾಗಲೆಲ್ಲಾ ನನಗೆ ನೆನಪಿಗೆ ಬರುವದು ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋದ ‘ಮಂದಣ್ಣ್’
ಮೊನ್ನೆನ ಘಟನೆ ಹೇಳಿದರೆ ಅದು ನಿಮಗೂ ಅನುಭವಕ್ಕೆ ಬರುತ್ತದೆ.
ವರ್ಷ ಬಿಟ್ಟು ವರ್ಷಕ್ಕೊಮ್ಮೆ ಬರುವ ಜೀರಿಗೆ ಉಪ್ಪಿನಕಾಯಿಯ ಮಿಡಿಮರ ಈ ವರ್ಷ ಭರಪೂರ್ ಮಿಡಿ ಕಚ್ಚಿತ್ತು. ಆ ದಿವಸ ಊರಿಗೆ ಹೊರಟಿದ್ದ ನನಗೆ ಆಯಿ “ ಮಾವಿನ ಮಿಡಿ ಬಲಿತಿದ್ದ ನೋಡಿ ಬಾ” ಎಂದು ಆದೇಶಿಸಿದ್ದಳು.ಸರಿ ಅಂದು ತೋಟದ ಮನೆಗೆ ಫೋನ್ ಮಾಡಿ ಸುಬ್ಯಾನಿಗೆ ಮನೆಯಲ್ಲೇ ಇದ್ದು ನನ್ನ ಬರವನ್ನು ಕಾಯಲು ಹೇಳಿದ್ದೆ. ಆಗಲೇ ಶುರುವಿಟ್ಟುಕೊಂಡಿದ್ದ. “ ಅಕಾ ಈ ವರ್ಷ ಹೊಸಾ ಮರಕ್ಕೆ ಮಿಡಿಕಚ್ಚಿದ್ದೊ. ಕಾಂಬಲ್ಲೆ ಗಿಳಿಮೂತಿ ಹಂಗೇ ಕಾಂತು.ಮರದ ಹತ್ರ ಹೋದ್ರೂ ಜೀರಿಗೆ ಪರಿಮಳ ಘಂ ಅಂತಿರ್ತು.” ಎಂದಿದ್ದ. ಸುಬ್ಯಾ ಎಂದರೆ ನನಗೆ ಬಲಗ್ಯೆ. ಅವನ ಪೂರ್ಣ ಮಾಹಿತಿ ಇನ್ನೊಂದ್ಸಲ.ಒಟ್ಟಿನಲ್ಲಿ ತೋಟದ ಮನೆಗೆ ಜೀವ ಇದ್ದುದೇ ಈ ಕುಟುಂಬದಿಂದಾಗಿತ್ತು.
ಇನ್ನೇನು ಹೊರಡ ಬೇಕು ಅಂದುಕೊಳ್ಳುತ್ತಿರುವಾಗಲೇ ನಮ್ಮ ಬೀದಿಯ ಗಿರೀಶನ ಮಾವ ಬಂದು ಗಿರೀಶ ಹೆಂದ್ತಿಗೆ ಹೊಡೆದಿದ್ದರಿಂದ ಪೋಲೀಸ್ ಠಾಣೆಗೆ ಹೋಗೋಣ್ವೆಂದು ಗಂಟು ಬಿದ್ದಿದ್ದರು .[ ಈ ಗಂಡ-ಹೆಂಡತಿಯದು ಹಳೇಯ ಆದರೆ ಬಹಳ ಆಸಕ್ತಿ ದಾಯಕ ಕಥೆ.] ಅವರ ಜೊತೆ ಸ್ಟೇಶನ್ನಿಗೆ ಹೋಗಿ ನಂತರ ತೋಟದ ಮನೆ ತಲುಪಿದಾಗ ಹನ್ನೆರಡು ಘಂಟೆ ದಾಟಿ ಹೋಗಿತ್ತು.ಮನೆಗೆ ಹೋದರೆ ಬಾಗಿಲ ತೆಗೆದವಳು ಸುಬ್ಯಾನ ಹೊಸ ಹೆಂಡತಿ ಮಾಸ್ತಿ. “ ಎಂತದೇ ಮಾಸ್ತಿ. ಎಂತಾ ನಡ್ಸಿದ್ದೆ. ಸುಬ್ಯಾನ ಕರಿ. ಬರೋದೇ ಹೊತ್ತಾಗೋತು.” ಅನ್ನುತ್ತಾ ಉಸ್ಸೆಂದು ಕುಳಿತವ್ಳಿಗೆ ತಣ್ಣಗಿನ ನೀರನ್ನು ಕೊಟ್ಟು “ ಅಕಾ ಅವ್ರು ಕಾದುಕಾದು ಸಾಕಾಗಿ ಇಲ್ಲೇ ಹೋಯಿ ಬರ್ತೀನಿ ಅಂತ ಬೆಟ್ಟಾ ಹತ್ತಿ ಹೋಯೀರು.” ಎಂದಳು.
“ ಎತ್ಲಾಗೇ, ಮಾವಿನ ಮರ ಇರೋದು ತ್ವಾಟ್ದ ದಿಬ್ಬದಲ್ಲಿ.ಅದು ಬಿಟ್ಟು ಇಂವೆಲ್ಲಿ ಹೋದ್ನೇ.? ನಾನು ಸ್ವಲ್ಪ ತ್ವಾಟ ಸುತ್ತಾಡಿಕ್ಯಂಡು ಆ ಮಾವಿನ ಮರದ ಹತ್ರ ಬರ್ತೆ. ಅಂವ್ನಹತ್ರ ಅಲ್ಲೇ ಬರೋದಕ್ಕೆ ಹೇಳು” ಎಂದವಳು ತೋಟದ ದಾರಿ ಹಿಡಿದಿದ್ದೆ.
“ಅಕ್ಕಾ ನೀವು ಬತ್ರಿ ಅಂತ ಕೆಸೀನ್ ಸೊಪ್ಪು ,ಹಲಸಿನ ಸೊಳೆ ಪಲ್ಯ ಮಾಡಕ್ಕೆ ಹೇಳಿದ್ರು.ಊಟ ಮಾಡೇ ಹೋಗಿ.” ಎಂದು ಹಿಂದಿನಿಂದ ಮಾಸ್ತಿಯ ದನಿ ತೂರಿ ಬಂದಿತ್ತು.
ಸುಮಾರು ಒಂದು ತಾಸು ಕಳೆದರೂ ಬಾರದ ಸುಬ್ಯಾನನ್ನ ಮನಸಿನಲ್ಲೇ ಶಪಿಸುತ್ತಾ ಸುಮ್ನೆ ಸಮಯ ತಿಂದ ಹಾಳಾದಂವ ಅಂದುಕೊಳ್ಳುತ್ತಲೇ ಹಿಂತಿರುಗಿದ್ದೆ.
ಮನೆಯ ಅಂಗಳ ಹತ್ತುತ್ತಿದ್ದಂತೇ ಯಾರೋ ಒಬ್ಬರು ಧಡಕ್ಕನೆ ಓಡಿದಂತಾಗಿ ಮನಸು ಕೇಡನ್ನ ಊಹಿಸಿತ್ತು.ಒಂಟಿ ಮನೆ.ಹೊಸದಾಗಿ ಬಂದ ಮಾಸ್ತಿ. “ ಮಾಸ್ತೀ ಎಲ್ಲಿದ್ಯೇ”ಅಂತ ಕೂಗಿಕೊಂಡೆ.
ಅರಿಶಿಣ ಮತ್ತೆ ತೆಂಗಿನೆಣ್ಣೆಯನ್ನ ಕಲಸುತ್ತಾ ಬಂದ ಮಾಸ್ತಿ ಮುಸುಮುಸಿ ನಗುತ್ತಿದ್ದಳು.“ಯಾಕೇ.?ಯಂತಾ ಆತು.? ಸುಬ್ಯಾ ಇನ್ನೂ ಬಂದಿಲ್ವಾ. ಅಂವ್ ಬಂದು ಮಾವಿನ್ ಮಿಡಿ ಕೊಯ್ದು ಕೊಡೋದು ಎಷ್ಟು ಹೊತ್ತಿಗೇ ಮಾರಾಯ್ತಿ” ಅಂದಾಗ ಅವಳ ನಗು ಇನ್ನಷ್ಟು ಹೆಚ್ಚಿತ್ತು.
ಅವಳ ನಗುವಿನಿಂದ ಏನೂ ತಿಳಿಯಲಾಗ್ದೇ “ ಮಾರಾಯ್ತಿ ನಗೋದು ಬಿಟ್ಟು ಎಂತಾ ಆತು ಹೇಳಾದ್ರೂ ಹೇಳು. ಸುಬ್ಯಾ ಬಂದ್ನ?” ಎಂದೆ ಗದರಿಕೊಂಡಂತೆ. ಒಳ್ ಹೊರಗೆಲ್ಲೂ ಸುಬ್ಯಾನ ಸುಳಿವಿರಲಿಲ್ಲ. “ ಅಕಾ, ನಿಮಗೆ ತೋರ್ಸೂಕಂತ್ಲೇ ಹೊಸ ಮಾವಿನ ಮಿಡಿ ತಂದೀರು.” ಎನ್ನುತ್ತಾ ಒಳ ಸರಿದವಳು ಒಂದು ಗೊಂಚಲು ಹದವಾಗಿದ್ದ ಮಾವಿನ ಮಿಡಿಯನ್ನು ತಂದು ಹಿಡಿದ್ಳು. “ ಇದೆಲ್ಲಿಂದ ಬಂತೇ. ಸುಬ್ಯಾ ಬರಲಿಲ್ಲವಾ ಇನ್ನೂ.” ಪುನಹ ಕೇಳಿದ್ದೆ. “ಅವರೀಗೆ ನಿಮ್ಗೆ ಮುಖ ತೋರ್ಸೂಕೆ ನಾಚ್ಕ್ಯಂಡು ಕೂತೀರು.” ಎಂದಾಗಾ ರೇಗಿ ಹೋಗಿತ್ತು.
‘ಇದೆಂತದೇ ಹೊಸಾ ರೂಪಾ.?”ಎಂದೆ. ಯಾವಾಗಲೂ ಗೇಟು ತೆಗೆಯುವ ಮೊದ್ಲೇ ಓಡಿ ಬಂದು ಹೊಸ ಬಾಳೆಗೊನೆ , ಕೆಂಪು ಮೂತಿಮಂಗ ಮಡಿದ ಬಾನಗ್ಡಿಯ ಬಗ್ಗೆಲ್ಲಾ ಹೇಳಿ ತಲೆ ತಿಂತಿದ್ದಾತ ಮಾತನಡಿಸುವದಿರಲಿ ನೋಡಲೂ ನಾಚಿಕೆಯೆಂದ್ರೆ....ನನಗೆ ಅರ್ಥವಾಗಲಿಲ್ಲ. “ ಹೊಸಾ ಗಡಿಗೆ ಇದ್ರೆ ಮುಚ್ಗಂಡು ಬರೋದಕ್ಕೆ ಹೇಳು.”ಎನ್ನುತ್ತಾ ಮಾವಿನ ಗೊಂಚಲನ್ನ ಹಿಡಿದು ಪರಿಮಳ ನೋಡ್ಲೆಂದು ಬಾಗಿದ್ದೆ.
ಅದೆಲ್ಲಿಂದ ಓಡಿಬಂದನೋ ಗೊತ್ತಿಲ್ಲ. ಅಕ್ಕಯ್ಯಾ ಬ್ಯಾಡಾ ಹಂಗೆ ಮೂಸಬ್ಯಾಡಿ.” ಎಂದು ಗೊಂಚಲನ್ನ ಕಸಿದವನತ್ತ ತಿರುಗಿದರೆ ಇದು ಸುಬ್ಯಾನೋ ಅತ್ವಾ ಕೆಂಪು ಮೂತಿ ಮಂಗನ ವಂಶವೇನದ್ರೂ ವಿಖಾಸ ಹೊಂದಿ ಹೀಂಗಾಗಿ ಬಂದಿದೆಯೇ ಎಂಬ ಭ್ರಮೆ ಮೂಡುವಂತಿತ್ತು ಅವನ ಮುಖ. “ ಏ ಇದೇನಾತೋ” ಬೆರಗಿನಿಂದ ಹೆಚ್ಚು ಕಡಿಮೆ ಕೂಗಿದ್ದೆ.
ಸುಬ್ಯಾನ ಹಿಂದಿನಿಂದ ಇನ್ನೊಂದು ಮಂಗನವತಾರ ತೂರಿ ಬಂದಿತ್ತು. ಸುಬ್ಯಾನ ತಮ್ಮ ಗಣಪನದ್ದು.
“ ಅದು, ಆ ಹೊಸ ಮರದ ಮಾವಿನ ಮಿಡಿ ನೋಡಿ ತಗಂಬಂದು ನಿಮಗೆ ತೋರ್ಸೋಕೆ ಅಂದಕಂಡು ಮಾಕಾಣೆ ಬೆಟ್ಟಕ್ಕೆ ಹೋಗಿದ್ವಕ್ಕಾ. ನಾನು ಮರ ಹತ್ತಿದ್ದೆ. ಇಂವಾ ಕೆಳ್ಗೆ ದೋಟಿ ಹಿಡಕಂಡು ನಿಂತಿದ್ದ. ನಾಲ್ಕುಗೊಂಚಲ ಇಳ್ಸಿ ವಾಸ್ನೆ ನೋಡು ಹೇಳಿದ್ದೇ ತಪ್ಪಾತು. ಇಂವ ಸೀದಾ ಮೂಗಿನ್ ಹತ್ರಾನೇ ಮಾವಿನ ಗೊಂಚಲ ಹಿಡ್ದು ಮುರ್ದಾ.ಸೊನೆ ಸಿಡ್ದು ಸೀದಾ ಮೂಗು ಕಣ್ಣಿನ ತುಂಬಾ
ಸೀರ್ತು. ಇಂವ ಉರಿ ತಡೆಯೋಕಾಗ್ದೇ ದೋಟಿಸಹಿತ ತಕಥ್ಯೆ ಮಾಡೋಕೆ ಶುರು ಮಾಡ್ದಾ.ಪಕ್ಕದಲ್ಲಿದ್ದ ಮತ್ತಿ ಮಡಿಗೆಗೆ ಜೇನು ಕಟ್ಟಿತ್ತು. ಇಂವ ಹಿಡಿದಿದ್ದ ದೋಟಿ ಜೇನುಗೂಡಿಗೆ ತಾಗ್ತು. ನಂಗೂ ಮರ ಇಳಿಯೋಕೆ ಬಿಡ್ಲಿಲ್ಲ. ಮುತ್ಗ ಬಿಟ್ವು.”ಎಂದ ಬಾತಿದ್ದ ಮುಖ ಮೂತಿಯನ್ನು ನೋವಿನಿಂದ ತಿರುವುತ್ತ.
ಇಬ್ಬರನ್ನೂ ನನ್ನ ಜೊತೆಗೇ ಪೇಟೆಗೆ ಕರೆತಂದು ಡಾಕ್ಟರಿಗೆ ತೋರಿಸಿ ಕಳುಹಿಸಿ ಬರುತ್ತಿದ್ದಂತೆ ಆಯಿ ಕೇಳಿದ್ದಳು, ಉಪ್ಪಿನ ಕಾಯಿ ಮಿಡಿ ಚೊಲೋ ಇದ್ದನೇ.” ಉತ್ತರಿಸುವ ಬದಲು ನಕ್ಕಿದ್ದೆ.

Saturday, April 11, 2009

ಪಯಣ ನಿರಂತರ
ನಾಲ್ಕೂ ದಿಕ್ಕನ್ನೂ ತುಂಬಿದ ಪುಟ್ಟ
ಹೂ ನಗೆ ಮನೆಯ ಬೆಳಗಿದ ಕಣ್ಣಕಾಂತಿ
ಹೊರಟು ನಿಂತಿದೆ
ನಾವೆಲ್ಲ ಕಣ್ಣೀರಿಗೆ ದತ್ತು .

ನಿನ್ನೆ-ಮೊನ್ನೆಯ ಮಾತು,
ಬಲಿಯದ ಪಾದಗಳ ಗುಲಾಬಿಯಂದ
ಒಲಿದೊಲಿದು ಬಿದ್ದು
ಸೋತು ಕಣ್ತುಂಬಿ ಅತ್ತಕ್ಷಣ
ಮುತ್ತಕೊಟ್ಟು,ಹೆಜ್ಜೆಗೊಂದು ಗೆಜ್ಜೆಯಿಟ್ಟು
ಕಿರು ಬೆರಳಿಗೊಂದು ಹಿರಿಬೆರಳನಿತ್ತು
ನಡೆದಿದ್ದೆವು ದಾರಿಹೊರಳುವತ್ತ.
ಕವಲೊಡೆದ ಕುಡಿಯ ಒಂಟಿಪಯಣವೆ
ಕಣ್ಣ ಮುತ್ತಾಗಿ ಸಾಗಿಹೋಗುತಿದೆ.
ಹೊಸ ಸಂಸಾರದ ಒಂಟಿತನಕ್ಕೆ
ಬಂದಿದ್ದಳವಳು ಆಟದ ಗೊಂಬೆಯಂತೆ.
ಸಾಕ್ಷಾತ್ಕರಿಸಿದ ಸ್ವಪ್ನವಾಗಿ.
ಅವಳೊಂದೊಂದು ಹಠ,ನನಗೊಂದೊಂದು ಆಟ.
ಹೊರಟಿದ್ದಾಳವಳು ಹೊಸ ಒಡನಾಟಕ್ಕೆ.!

ಅಳುತ್ತಳುತ್ತಲೇ ರಾಗವಾದವಳು,
ತೊದಲಿ ತೊದಲಿ ದನಿಯಾದಳು.
ಪಿಸುಮಾತೂ ಹೊಸ ಹೊಸ ಪದಕೋಶ
ಆಡದ ಮಾತಿಲ್ಲ, ಹಾಡದ ಹಾಡಿಲ್ಲ.
ಕಣ್ಣು ತುಂಬಿದ್ದಾಳವಳು ಮಾತೇ ಮರೆತಂತೆ.!

ಅಕ್ಷರ ಕಲಿವ ಮೊದಲೇ ಮಹಾಸಾಕ್ಷರಿಯವಳು.
ಗೀಚಿದ ಗೋಡೆಚಿತ್ತಾರದ ಗೆರೆ ಮಾಸಿಲ್ಲ,ಹಸಿಯಾರಿಲ್ಲ
ಉಸಿರ ಉಸಿರಾಗಿ ಬೆರೆತು ಬಿಟ್ಟವಳು
ಹೊರಟು ನಿಂತಿದ್ದಾಳೆ ಕಾಲವೇ ನಿಂತುಬಿಟ್ಟಂತೆ

Saturday, April 4, 2009

ಅಸಂಗತ

ಯಾರೂ ತುಳಿದ ಪಯಣವಿದಲ್ಲ. ಆದರೆ ನಡೆದ ದಾರಿಯ ಹೆಜ್ಜೆ ಗುರುತುಗಳನ್ನ ಊರಲು ಎಲ್ಲರಿಗೂ ಆಸ್ಪದವಿರುವದಿಲ್ಲ. ಆ ಅವಕಾಶ ನನಗೆ ಸಿಕ್ಕಿದೆ. ಸಾವಕಾಶವಾಗಿ ನಿಮ್ಮೆದುರು ತೆರೆದಿಡುವ ಮಾತುಗಳೆಲ್ಲ ಸುಸಂಬದ್ದವೇ ಆಗಿಬಿಡುವ ಸಾದ್ಯತೆಗಳ ಬಗ್ಗೆ ಯೋಚಿಸಿಲ್ಲ. ಪುರುಸೊತ್ತಾಗಿ ಕುಳಿತು ಹರಟುವ ಉಮೇದಿನಲ್ಲಿ ಮೌನ ಮಾತಾಗಿ ಹರಿಯಲೆಂಬ ಬಯಕೆ...... ಹೊಸದಾಗಿ ಆರಂಭಿಸಿರುವ ಈ ಮಾತಿನ ಮನೆಯನ್ನ ಒಂದಿಷ್ಟು ಅಲಂಕರಿಸೋಣ ವೆಂದುಕೊಂಡೆ. ಮರುಕ್ಷಣವೇ ಒಂದಿಷ್ಟು ಅವಕಾಶವನ್ನು ಇಲ್ಲಿ ಹಾದು ಹೋಗುವವರಿಗೂ ಕಲ್ಪಿಸಿ ನೋಡೋಣವೆನ್ನಿಸಿದೆ. ಆಡಿದಷ್ಟೂ ಮುಗಿಯದ ಮೌನಕ್ಕೆ ಶರಣಾಗಿಯಾಗಿದೆ.ಇದೇದಾರಿ, ಹೀಗೇ ಹೋಗಬೇಕೆಂಬ ನಿರ್ದಿಷ್ಟತೆ ಕಾಡದು. ದಾರಿತೆರೆದಂತೇ ಗಮ್ಯ ಹುಡುಕುವ ಮನಸು.ನಿಮ್ಮ ಅಭಿಪ್ರಾಯವೂ ನನ್ನೀ ಅರಮನೆಗೆ ಒಂದು ಆವರಣವನ್ನು ನೀಡುತ್ತದೆಂಬ ಭರವಸೆ ಇದೆ. ಈ ಹೊಸಪಯಣದ ಜೊತೆಗಾರರ ನಿರೀಕ್ಷೆ ಹಾಗೂ ಜೊತೆಗೂಡುವ ಹೆಜ್ಜೆ ಕೊಡುವ ಹೊಸ ಅನುಭವದ ಬಗ್ಗೆ ಕುತೂಹಲವಿದೆ. ನೂರೆಂಟು ಅಸಂಗತಗಳ ನಡುವೆ ಬ್ಲಾಗ್ಪಯಣದಾರಂಭವಿಟ್ಟುಕೊಂಡಿದ್ದೇನೆ. ನಾವು ಮತ್ತು ನೀವು ಕೂಡಿ ಹೋಗಬೇಕಾದ ಹಾದಿಯ ನಡುವೆ ಅರೆಕ್ಷಣ ದಯವಿಟ್ಟು ಬನ್ನಿ.ನಿಮ್ಮ ಸ್ನೇಹದಿಂದ ಚಂದಗಾಣಿಸಿಕೊಡಿ. ನಾವೆಲ್ಲ ಸೇರಿ ಸಾಗೋಣ ಆಗದಾ? -ವಂದನೆಗಳೊಂದಿಗೆ. ಶೈಲಜ