Saturday, April 25, 2009

ಸುಬ್ಯಾ ಅನ್ನೋ ಮಂದಣ್ಣ.

ನಮ್ಮ ಮನೆ ತಂಡದ ಆಳು ಸುಬ್ಯಾ ಅಥವಾ ಸುಬ್ಬಯ್ಯನನ್ನ ನೋಡಿದಾಗಲೆಲ್ಲಾ ನನಗೆ ನೆನಪಿಗೆ ಬರುವದು ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋದ ‘ಮಂದಣ್ಣ್’
ಮೊನ್ನೆನ ಘಟನೆ ಹೇಳಿದರೆ ಅದು ನಿಮಗೂ ಅನುಭವಕ್ಕೆ ಬರುತ್ತದೆ.
ವರ್ಷ ಬಿಟ್ಟು ವರ್ಷಕ್ಕೊಮ್ಮೆ ಬರುವ ಜೀರಿಗೆ ಉಪ್ಪಿನಕಾಯಿಯ ಮಿಡಿಮರ ಈ ವರ್ಷ ಭರಪೂರ್ ಮಿಡಿ ಕಚ್ಚಿತ್ತು. ಆ ದಿವಸ ಊರಿಗೆ ಹೊರಟಿದ್ದ ನನಗೆ ಆಯಿ “ ಮಾವಿನ ಮಿಡಿ ಬಲಿತಿದ್ದ ನೋಡಿ ಬಾ” ಎಂದು ಆದೇಶಿಸಿದ್ದಳು.ಸರಿ ಅಂದು ತೋಟದ ಮನೆಗೆ ಫೋನ್ ಮಾಡಿ ಸುಬ್ಯಾನಿಗೆ ಮನೆಯಲ್ಲೇ ಇದ್ದು ನನ್ನ ಬರವನ್ನು ಕಾಯಲು ಹೇಳಿದ್ದೆ. ಆಗಲೇ ಶುರುವಿಟ್ಟುಕೊಂಡಿದ್ದ. “ ಅಕಾ ಈ ವರ್ಷ ಹೊಸಾ ಮರಕ್ಕೆ ಮಿಡಿಕಚ್ಚಿದ್ದೊ. ಕಾಂಬಲ್ಲೆ ಗಿಳಿಮೂತಿ ಹಂಗೇ ಕಾಂತು.ಮರದ ಹತ್ರ ಹೋದ್ರೂ ಜೀರಿಗೆ ಪರಿಮಳ ಘಂ ಅಂತಿರ್ತು.” ಎಂದಿದ್ದ. ಸುಬ್ಯಾ ಎಂದರೆ ನನಗೆ ಬಲಗ್ಯೆ. ಅವನ ಪೂರ್ಣ ಮಾಹಿತಿ ಇನ್ನೊಂದ್ಸಲ.ಒಟ್ಟಿನಲ್ಲಿ ತೋಟದ ಮನೆಗೆ ಜೀವ ಇದ್ದುದೇ ಈ ಕುಟುಂಬದಿಂದಾಗಿತ್ತು.
ಇನ್ನೇನು ಹೊರಡ ಬೇಕು ಅಂದುಕೊಳ್ಳುತ್ತಿರುವಾಗಲೇ ನಮ್ಮ ಬೀದಿಯ ಗಿರೀಶನ ಮಾವ ಬಂದು ಗಿರೀಶ ಹೆಂದ್ತಿಗೆ ಹೊಡೆದಿದ್ದರಿಂದ ಪೋಲೀಸ್ ಠಾಣೆಗೆ ಹೋಗೋಣ್ವೆಂದು ಗಂಟು ಬಿದ್ದಿದ್ದರು .[ ಈ ಗಂಡ-ಹೆಂಡತಿಯದು ಹಳೇಯ ಆದರೆ ಬಹಳ ಆಸಕ್ತಿ ದಾಯಕ ಕಥೆ.] ಅವರ ಜೊತೆ ಸ್ಟೇಶನ್ನಿಗೆ ಹೋಗಿ ನಂತರ ತೋಟದ ಮನೆ ತಲುಪಿದಾಗ ಹನ್ನೆರಡು ಘಂಟೆ ದಾಟಿ ಹೋಗಿತ್ತು.ಮನೆಗೆ ಹೋದರೆ ಬಾಗಿಲ ತೆಗೆದವಳು ಸುಬ್ಯಾನ ಹೊಸ ಹೆಂಡತಿ ಮಾಸ್ತಿ. “ ಎಂತದೇ ಮಾಸ್ತಿ. ಎಂತಾ ನಡ್ಸಿದ್ದೆ. ಸುಬ್ಯಾನ ಕರಿ. ಬರೋದೇ ಹೊತ್ತಾಗೋತು.” ಅನ್ನುತ್ತಾ ಉಸ್ಸೆಂದು ಕುಳಿತವ್ಳಿಗೆ ತಣ್ಣಗಿನ ನೀರನ್ನು ಕೊಟ್ಟು “ ಅಕಾ ಅವ್ರು ಕಾದುಕಾದು ಸಾಕಾಗಿ ಇಲ್ಲೇ ಹೋಯಿ ಬರ್ತೀನಿ ಅಂತ ಬೆಟ್ಟಾ ಹತ್ತಿ ಹೋಯೀರು.” ಎಂದಳು.
“ ಎತ್ಲಾಗೇ, ಮಾವಿನ ಮರ ಇರೋದು ತ್ವಾಟ್ದ ದಿಬ್ಬದಲ್ಲಿ.ಅದು ಬಿಟ್ಟು ಇಂವೆಲ್ಲಿ ಹೋದ್ನೇ.? ನಾನು ಸ್ವಲ್ಪ ತ್ವಾಟ ಸುತ್ತಾಡಿಕ್ಯಂಡು ಆ ಮಾವಿನ ಮರದ ಹತ್ರ ಬರ್ತೆ. ಅಂವ್ನಹತ್ರ ಅಲ್ಲೇ ಬರೋದಕ್ಕೆ ಹೇಳು” ಎಂದವಳು ತೋಟದ ದಾರಿ ಹಿಡಿದಿದ್ದೆ.
“ಅಕ್ಕಾ ನೀವು ಬತ್ರಿ ಅಂತ ಕೆಸೀನ್ ಸೊಪ್ಪು ,ಹಲಸಿನ ಸೊಳೆ ಪಲ್ಯ ಮಾಡಕ್ಕೆ ಹೇಳಿದ್ರು.ಊಟ ಮಾಡೇ ಹೋಗಿ.” ಎಂದು ಹಿಂದಿನಿಂದ ಮಾಸ್ತಿಯ ದನಿ ತೂರಿ ಬಂದಿತ್ತು.
ಸುಮಾರು ಒಂದು ತಾಸು ಕಳೆದರೂ ಬಾರದ ಸುಬ್ಯಾನನ್ನ ಮನಸಿನಲ್ಲೇ ಶಪಿಸುತ್ತಾ ಸುಮ್ನೆ ಸಮಯ ತಿಂದ ಹಾಳಾದಂವ ಅಂದುಕೊಳ್ಳುತ್ತಲೇ ಹಿಂತಿರುಗಿದ್ದೆ.
ಮನೆಯ ಅಂಗಳ ಹತ್ತುತ್ತಿದ್ದಂತೇ ಯಾರೋ ಒಬ್ಬರು ಧಡಕ್ಕನೆ ಓಡಿದಂತಾಗಿ ಮನಸು ಕೇಡನ್ನ ಊಹಿಸಿತ್ತು.ಒಂಟಿ ಮನೆ.ಹೊಸದಾಗಿ ಬಂದ ಮಾಸ್ತಿ. “ ಮಾಸ್ತೀ ಎಲ್ಲಿದ್ಯೇ”ಅಂತ ಕೂಗಿಕೊಂಡೆ.
ಅರಿಶಿಣ ಮತ್ತೆ ತೆಂಗಿನೆಣ್ಣೆಯನ್ನ ಕಲಸುತ್ತಾ ಬಂದ ಮಾಸ್ತಿ ಮುಸುಮುಸಿ ನಗುತ್ತಿದ್ದಳು.“ಯಾಕೇ.?ಯಂತಾ ಆತು.? ಸುಬ್ಯಾ ಇನ್ನೂ ಬಂದಿಲ್ವಾ. ಅಂವ್ ಬಂದು ಮಾವಿನ್ ಮಿಡಿ ಕೊಯ್ದು ಕೊಡೋದು ಎಷ್ಟು ಹೊತ್ತಿಗೇ ಮಾರಾಯ್ತಿ” ಅಂದಾಗ ಅವಳ ನಗು ಇನ್ನಷ್ಟು ಹೆಚ್ಚಿತ್ತು.
ಅವಳ ನಗುವಿನಿಂದ ಏನೂ ತಿಳಿಯಲಾಗ್ದೇ “ ಮಾರಾಯ್ತಿ ನಗೋದು ಬಿಟ್ಟು ಎಂತಾ ಆತು ಹೇಳಾದ್ರೂ ಹೇಳು. ಸುಬ್ಯಾ ಬಂದ್ನ?” ಎಂದೆ ಗದರಿಕೊಂಡಂತೆ. ಒಳ್ ಹೊರಗೆಲ್ಲೂ ಸುಬ್ಯಾನ ಸುಳಿವಿರಲಿಲ್ಲ. “ ಅಕಾ, ನಿಮಗೆ ತೋರ್ಸೂಕಂತ್ಲೇ ಹೊಸ ಮಾವಿನ ಮಿಡಿ ತಂದೀರು.” ಎನ್ನುತ್ತಾ ಒಳ ಸರಿದವಳು ಒಂದು ಗೊಂಚಲು ಹದವಾಗಿದ್ದ ಮಾವಿನ ಮಿಡಿಯನ್ನು ತಂದು ಹಿಡಿದ್ಳು. “ ಇದೆಲ್ಲಿಂದ ಬಂತೇ. ಸುಬ್ಯಾ ಬರಲಿಲ್ಲವಾ ಇನ್ನೂ.” ಪುನಹ ಕೇಳಿದ್ದೆ. “ಅವರೀಗೆ ನಿಮ್ಗೆ ಮುಖ ತೋರ್ಸೂಕೆ ನಾಚ್ಕ್ಯಂಡು ಕೂತೀರು.” ಎಂದಾಗಾ ರೇಗಿ ಹೋಗಿತ್ತು.
‘ಇದೆಂತದೇ ಹೊಸಾ ರೂಪಾ.?”ಎಂದೆ. ಯಾವಾಗಲೂ ಗೇಟು ತೆಗೆಯುವ ಮೊದ್ಲೇ ಓಡಿ ಬಂದು ಹೊಸ ಬಾಳೆಗೊನೆ , ಕೆಂಪು ಮೂತಿಮಂಗ ಮಡಿದ ಬಾನಗ್ಡಿಯ ಬಗ್ಗೆಲ್ಲಾ ಹೇಳಿ ತಲೆ ತಿಂತಿದ್ದಾತ ಮಾತನಡಿಸುವದಿರಲಿ ನೋಡಲೂ ನಾಚಿಕೆಯೆಂದ್ರೆ....ನನಗೆ ಅರ್ಥವಾಗಲಿಲ್ಲ. “ ಹೊಸಾ ಗಡಿಗೆ ಇದ್ರೆ ಮುಚ್ಗಂಡು ಬರೋದಕ್ಕೆ ಹೇಳು.”ಎನ್ನುತ್ತಾ ಮಾವಿನ ಗೊಂಚಲನ್ನ ಹಿಡಿದು ಪರಿಮಳ ನೋಡ್ಲೆಂದು ಬಾಗಿದ್ದೆ.
ಅದೆಲ್ಲಿಂದ ಓಡಿಬಂದನೋ ಗೊತ್ತಿಲ್ಲ. ಅಕ್ಕಯ್ಯಾ ಬ್ಯಾಡಾ ಹಂಗೆ ಮೂಸಬ್ಯಾಡಿ.” ಎಂದು ಗೊಂಚಲನ್ನ ಕಸಿದವನತ್ತ ತಿರುಗಿದರೆ ಇದು ಸುಬ್ಯಾನೋ ಅತ್ವಾ ಕೆಂಪು ಮೂತಿ ಮಂಗನ ವಂಶವೇನದ್ರೂ ವಿಖಾಸ ಹೊಂದಿ ಹೀಂಗಾಗಿ ಬಂದಿದೆಯೇ ಎಂಬ ಭ್ರಮೆ ಮೂಡುವಂತಿತ್ತು ಅವನ ಮುಖ. “ ಏ ಇದೇನಾತೋ” ಬೆರಗಿನಿಂದ ಹೆಚ್ಚು ಕಡಿಮೆ ಕೂಗಿದ್ದೆ.
ಸುಬ್ಯಾನ ಹಿಂದಿನಿಂದ ಇನ್ನೊಂದು ಮಂಗನವತಾರ ತೂರಿ ಬಂದಿತ್ತು. ಸುಬ್ಯಾನ ತಮ್ಮ ಗಣಪನದ್ದು.
“ ಅದು, ಆ ಹೊಸ ಮರದ ಮಾವಿನ ಮಿಡಿ ನೋಡಿ ತಗಂಬಂದು ನಿಮಗೆ ತೋರ್ಸೋಕೆ ಅಂದಕಂಡು ಮಾಕಾಣೆ ಬೆಟ್ಟಕ್ಕೆ ಹೋಗಿದ್ವಕ್ಕಾ. ನಾನು ಮರ ಹತ್ತಿದ್ದೆ. ಇಂವಾ ಕೆಳ್ಗೆ ದೋಟಿ ಹಿಡಕಂಡು ನಿಂತಿದ್ದ. ನಾಲ್ಕುಗೊಂಚಲ ಇಳ್ಸಿ ವಾಸ್ನೆ ನೋಡು ಹೇಳಿದ್ದೇ ತಪ್ಪಾತು. ಇಂವ ಸೀದಾ ಮೂಗಿನ್ ಹತ್ರಾನೇ ಮಾವಿನ ಗೊಂಚಲ ಹಿಡ್ದು ಮುರ್ದಾ.ಸೊನೆ ಸಿಡ್ದು ಸೀದಾ ಮೂಗು ಕಣ್ಣಿನ ತುಂಬಾ
ಸೀರ್ತು. ಇಂವ ಉರಿ ತಡೆಯೋಕಾಗ್ದೇ ದೋಟಿಸಹಿತ ತಕಥ್ಯೆ ಮಾಡೋಕೆ ಶುರು ಮಾಡ್ದಾ.ಪಕ್ಕದಲ್ಲಿದ್ದ ಮತ್ತಿ ಮಡಿಗೆಗೆ ಜೇನು ಕಟ್ಟಿತ್ತು. ಇಂವ ಹಿಡಿದಿದ್ದ ದೋಟಿ ಜೇನುಗೂಡಿಗೆ ತಾಗ್ತು. ನಂಗೂ ಮರ ಇಳಿಯೋಕೆ ಬಿಡ್ಲಿಲ್ಲ. ಮುತ್ಗ ಬಿಟ್ವು.”ಎಂದ ಬಾತಿದ್ದ ಮುಖ ಮೂತಿಯನ್ನು ನೋವಿನಿಂದ ತಿರುವುತ್ತ.
ಇಬ್ಬರನ್ನೂ ನನ್ನ ಜೊತೆಗೇ ಪೇಟೆಗೆ ಕರೆತಂದು ಡಾಕ್ಟರಿಗೆ ತೋರಿಸಿ ಕಳುಹಿಸಿ ಬರುತ್ತಿದ್ದಂತೆ ಆಯಿ ಕೇಳಿದ್ದಳು, ಉಪ್ಪಿನ ಕಾಯಿ ಮಿಡಿ ಚೊಲೋ ಇದ್ದನೇ.” ಉತ್ತರಿಸುವ ಬದಲು ನಕ್ಕಿದ್ದೆ.

2 comments:

  1. wow.. its nice.. funny.. amma, uppina kaayi aadre cholo aagittu. adu yanto heltwale.. kai kesaraadare baayi mosaru heli.. idke aagikku.. alda??

    ReplyDelete
  2. ಶೈಲಜಕ್ಕ, ಈ ಕಥೆ ಊರಿಗೆ ಬಂದಾಗ ನಿನ್ನಿಂದ್ಲೇ ಕೆಳಿದಿದ್ದೆ.. ಓದಿ ಖುಶಿ ಆತು... ಹಿಂಗೆ ನಿನ್ನ ಕಥೆ-ಕವನಗಳ ಬತ್ತಳಿಕೆಯಿಂದ ಎಲ್ಲ ಹೊರಬರಲಿ :-)

    ReplyDelete